Breaking News
Home / General News / ವಚನ ಚಳುವಳಿ : ಪರಿಪೂರ್ಣ ಪರಿವರ್ತನೆ

ವಚನ ಚಳುವಳಿ : ಪರಿಪೂರ್ಣ ಪರಿವರ್ತನೆ

ವಚನ ಚಳುವಳಿ : ಪರಿಪೂರ್ಣ ಪರಿವರ್ತನೆ —————————————- ಪರಿವರ್ತನೆ ಜಗದ ಸಹಜವಾದ ನಿಯಮ ಎನ್ನುವುದು ತೀರ ಸಾಮಾನ್ಯ ಮತ್ತು ಭಾರತೀಯರಿಗೆ ಅಷ್ಟಾಗಿ ಅನ್ವಯಿಸದ ಮಾತು. ಈ ನೆಲದ ಮಣ್ಣಿನಲ್ಲಿ ಬದಲಾವಣೆಯನ್ನು ಬೆರಗುಗಣ್ಣಿನಿಂದ ನೋಡುತ್ತ ಹೃದಯಪೂರ್ವಕವಾಗಿ ಸ್ವಾಗತಿಸುವ ಔದಾರ್ಯಯುತ ಗುಣದ ಕೊರತೆಯಿದೆ. ಜೀವನದಲ್ಲಿ ಎದುರುಗೊಳ್ಳುವ ಪ್ರತಿಯೊಂದನ್ನೂ ಸಂಶಯದ ಕಣ್ಣಿನಿಂದ ನೋಡಿ ಅವುಗಳನ್ನು ತಕ್ಷಣ ವಿರೋಧಿಸುವ ಗುಣ ಇಲ್ಲಿನ ಇತಿಹಾಸದುದ್ದಕ್ಕೂ ಪ್ರಕಟವಾಗಿರುವುದನ್ನು ಕಾಣಬಹುದಾಗಿದೆ. ಸಂಶಯವೆನ್ನುವುದು ಬಹಳ ಕೆಟ್ಟ ವಿಷಯ. ಅದು ಸುಳ್ಳನ್ನು ಸತ್ಯವೆಂದುˌಸತ್ಯವನ್ನು ಸುಳ್ಳೆಂದುˌಇನ್ನೇನನ್ನೋ ಇನ್ನೇನೇನೋ ಆಗಿ ಕಾಣಿಸುವಂತೆ ಮಾಡುವ ವಿಚಿತ್ರ ಮನಸ್ಥಿತಿ. ಅದನ್ನು ಬಸವಣ್ಣನವರು ತಮ್ಮ ಈ ಕೆಳಗಿನ ವಚನದಲ್ಲಿ ಬಹಳ ಅರ್ಥಪೂರ್ಣವಾಗಿ ಬಿಂಬಿಸಿದ್ದಾರೆ : ಹುತ್ತದ ಮೇಲಣ ರಜ್ಜು ಮುಟ್ಟಿದಡೆ ಸಾವರು ಶಂಕಿತರಾದವರುˌ ಸರ್ಪದಷ್ಟವಾದಡೆಯೂ ಸಾಯರು ನಿಶ್ಯಂಕಿತರಾದವರು. ಕೂಡಲಸಂಗಮದೇವಯ್ಯಾ ˌ ಶಂಕಿತಂಗೆ ಪ್ರಸಾದ ಸಿಂಗಿ ಕಾಳಕೂಟವಿಷವು. ~ಬಸವಣ್ಣ. ಸಂಶಯದ ಸ್ವಭಾವವಿರುವಂತ ಮನುಷ್ಯ ಅಕಶ್ಮಿಕವಾಗಿ ಹುತ್ತೊಂದರ ಮೇಲಿನ ಮಣ್ಣು ಮುಟ್ಟಿದರೂ ಹಾವು ಕಚ್ಚಿತೆಂಬ ಸಂಶಯದಿಂದ ಸತ್ತೆಹೋಗುತ್ತಾನೆ. ಸಂಶಯವಿಲ್ಲದಾತನಿಗೆ ದಿಟದಲ್ಲಿ ಹಾವು ಕಚ್ಚಿದರೂ ಸಾಯುವುದಿಲ್ಲ. ಹಾಗಾಗಿ ಸಂಶಯಗ್ರಸ್ಥರಿಗೆ ದೇವರ ಪ್ರಸಾದವೂ ಕಾಳಕೂಟವಿಷದಂತೆ ಎನ್ನುತ್ತಾರೆ ಬಸವಣ್ಣನವರು. ಬದುಕಿನುದ್ದಕ್ಕೂ ಹೊಸ ವಿಚಾರಗಳನ್ನು ತಿಳಿದುಕೊಳ್ಳಲಿಚ್ಛಿಸದˌತಿಳಿದು ಒಪ್ಪಿ ˌಅಪ್ಪಿಕೊಳ್ಳಲೊಲ್ಲದ ನಮ್ಮ ಜನ ಸ್ಥಾಪಿತ ವಿಚಾರಗಳ ದಾಸಾನುದಾಸರಾಗಿರುವುದು ಒಂದು ಬಹುದೊಡ್ಡ ಶಾಪವೇ ಸರಿ. ಇಲ್ಲಿನ ಜನರ ಈ ಮನಸ್ಥಿತಿಗೆ ಅನೇಕ ಕಾರಣಗಳುಂಟು. ಪ್ರಾಚೀನ ಕಾಲದಲ್ಲಿ ಮೂಲತಃ ಅನಕ್ಷರಸ್ಥರಾಗಿದ್ದ ಈ ನೆಲಮೂಲದ ಜನ ತಮ್ಮ ಮೇಲೆ ಬಲವಂತವಾಗಿ ಹೇರಲ್ಪಟ್ಟ ವಿಚಾರಗಳು ತಮ್ಮ ಒಳಿತಿಗಾಗಿ ಎಂದು ತಪ್ಪಾಗಿ ಭಾವಿಸಿˌಅವುಗಳನ್ನೇ ತಮ್ಮ ತಲೆಯ ಮೇಲೆ ಹೊತ್ತು ಮೆರೆಸಿದ ಮತ್ತು ಇಂದಿನ ಅಧುನಿಕ ಯುಗದಲ್ಲೂ ಮೆರೆಸುತ್ತಿರುವ ಅತಿ ಮುಗ್ಧರು. ತಮ್ಮಿಂದ ನಂಬಲ್ಪಟ್ಟ ಬೇರೆ ಯಾರೋ ಹೇರಿದ ವಿಚಾರಗಳಿಗೆ ಆಪತ್ತು ಎದುರಾಗಲಿದೆ ಎಂದು ಆ ವಿಚಾರಗಳು ಹೇರಿದವರು ಪ್ರಚೋದಿಸಿದರೆ ಸಾಕು ಅದರ ವಿರುದ್ಧ ಪ್ರತಿಭಟಿಸುವˌಯಾರಿಂದ ಆಪತ್ತಿದೆಯೆಂದು ಹೇಳಿರುತ್ತಾರೊ ಅವರ ತಲೆ ತಗೆಯುವುದಕ್ಕೂ ಹಿಂದೆಮುಂದೆ ನೋಡದ ತೀರ ಅಮಾಯಕರು ಇಲ್ಲಿನ ಜನ. ಇದು ಭಾರತದ ಪುರಾಣಗಳುˌಇತಿಹಾಸˌಜನಪದ ಸಾಹಿತ್ಯಗಳಲ್ಲಿನ ವಿಷಯಗಳಲ್ಲಿ ನಮೂದಾಗಿರುವುದರಿಂದ ಮೊದಲ್ಗೊಂಡು ತೀರ ಇತ್ತೀಚಿನ ವಿಚಾರವಾದಿ ದಾಬೋಲ್ಕರˌಕಾಮ್ರೇಡ್ ಪನ್ಸಾರೆˌಸಂಶೋಧಕ ಡಾ. ಕಲಬುರಗಿ ಮತ್ತು ಪತ್ರಕರ್ತೆˌಸಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರುಗಳ ದಾರುಣ ಹತ್ಯೆಗಳ ತನಕ ಅವ್ಯಾಹತವಾಗಿ ಸಾಗಿಬಂದಿದ್ದನ್ನು ನಾವು ನೋಡಬಹುದು. ಭರತಖಂಡದಲ್ಲಿ ಅನಾದಿಕಾಲದಿಂದ ಜಮಾಜದ ಪಾರುಪತ್ಯವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡಿದ್ದ ಕರ್ಮಠರು ಈ ಮಣ್ಣಿನಲ್ಲಿ ಬದಲಾವಣೆಯ ಗಾಳಿ ಬೀಸದಂತೆ ಕಣ್ಣಲ್ಲಿ ಕಣ್ಣಿಟ್ಟು ಎಚ್ಚರವಹಿಸುತ್ತಾರೆ. ಅದಾಗ್ಯು ˌಬುದ್ದನ ಆಗಮನದ ಮೂಲಕ ಹುಟ್ಟಿಕೊಂಡ ಹೊಸ ವಿಚಾರಗಳನ್ನು ಆರಂಭದಲ್ಲೆ ಕರ್ಮಠರು ಹೊಸಕಿಹಾಕುತ್ತಾರೆ. ತದನಂತರ ಕನ್ನಡ ನೆಲದಲ್ಲಿ ಬಸವಣ್ಣನವರ ಮುಂದಾಳತ್ವದಲ್ಲಿ ಹುಟ್ಟಿಕೊಂಡದ್ದೆ ವಚನ ಚಳುವಳಿ. ಶರಣರ ವಚನ ಚಳುವಳಿ ವೈದಿಕ ಕರ್ಮಠರಿಗೆ ಎಲ್ಲ ಬಗೆಯಿಂದಲೂ ಬಹುದೊಡ್ಡ ಪೆಟ್ಟನ್ನು ನೀಡಿದ್ದು ಗಮನಾರ್ಹ. ಕರ್ಮಠರ ಪ್ರತಿಯೊಂದು ಕುಠಿಲ ಹುನ್ನಾರಗಳನ್ನು ಪ್ರತಿಬಂಧಿಸುವ ಪರ್ಯಾಯ ಮಾರ್ಗೋಪಾಯಗಳನ್ನು ಶರಣರು ಬಹು ಜಾಣತನದಿಂದ ಕಂಡುಕೊಂಡು ಜನಮಾನಸದಲ್ಲಿ ಬಿತ್ತರಿಸುತ್ತಾರೆ. ಸಾಹಿತ್ಯದ ಭಾಷೆ ಎಂದರೆ ದೇವಭಾಷೆ ಸಂಸ್ಕ್ರತ ಮಾತ್ರ ಎಂದು ಪ್ರತಿಬಿಂಬಿಸಿಲ್ಪಟ್ಟ ಅಂದಿನ ಕಾಲದಲ್ಲಿ ಸಂಸ್ಕ್ರತವನ್ನು ದಿಕ್ಕರಿಸಿ ನೆಲಮೂಲದ ಸಾಮಾನ್ಯನ ಆಡುಭಾಷೆ ಕನ್ನಡಕ್ಕೆ ಮನ್ನಣೆ ನೀಡಿ ವಚನ ಚಳುವಳಿಯನ್ನು ಶರಣರು ಆರಂಭಿಸುವ ಮೂಲಕ ಸ್ಥಾಪಿತ ಸ್ವಹಿತಾಸಕ್ತ ಪರಂಪರೆಯೊಂದಕ್ಕೆ ಕೊಡಲಿಪೆಟ್ಟು ನೀಡುತ್ತಾರೆ. ದೇವರುˌಧರ್ಮ ಮತ್ತು ದೇಗುಲ ಪರಿಕಲ್ಪನೆಗಳ ಮೂಲಕ ತಮ್ಮ ಪರಾವಲಂಬಿ ಜೀವನವು ಸರಳಗೊಳಿಸಿಕೊಂಡಿದ್ದ ಪುರೋಹಿತಶಾಹಿ ಸಂತತಿಗೆ ಪರ್ಯಾಯ ಇಷ್ಟಲಿಂಗ ಪೂಜೆ ಪರಿಕಲ್ಪನೆಯ ಮುಖೇನ ದೇಗುಲ ಸಂಸ್ಕ್ರತಿಯನ್ನು ದಿಕ್ಕರಿಸಿˌದೇವರು ಮತ್ತು ಭಕ್ತರ ನಡುವಿನ ದಲ್ಲಾಳಿ ವ್ಯವಸ್ಥೆ ಅಲ್ಲಗಳೆದು ಕರ್ಮಠರಿಗೆ ಮರ್ಮಾಘಾತ ನೀಡುತ್ತಾರೆ. ತಮ್ಮ ಸುರಕ್ಷಿತ ಜೀವನದ ಕನಸಿನೊಂದಿಗೆ ಕರ್ಮಠರು ಹುಟ್ಟುಹಾಕಿದ್ದ ಶ್ರೇಣೀಕ್ರತ ಜಾತಿ ವ್ಯವಸ್ಥೆಯನ್ನು ಶರಣರು ಅಲ್ಲಗಳೆದು ಸಮಾಜದ ಅಂತ್ಯಜರನ್ನೊಳಗೊಂಡಂತೆ ಸಮಸಮಾಜದ ನಿರ್ಮಾಣ ಕಾರ್ಯ ಆರಂಭಿಸುವ ಮೂಲಕ ವರ್ಣ-ವರ್ಗ-ಲಿಂಗಭೇದ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಾರೆ. ಈ ರೀತಿಯಾಗಿ ಹಲವಾರು ಬಗೆಯಲ್ಲಿ ಶರಣರ ಕಾರ್ಯಗಳು ಸಮಗ್ರವಾದ ಪರ್ಯಾಯ ವ್ಯವಸ್ಥೆಯ ಸೂಕ್ಷ್ಮಗಳನ್ನು ಸಮಾಜದಲ್ಲಿ ಪರಿಣಾಮಕಾರಿಯಾಗಿ ಬಿತ್ತುತ್ತ ಸಾಗುತ್ತವೆ. ಪ್ರಕೃತಿಸಹಜವಾದ ಸ್ತ್ರೀಯ ಮಾಸಿಕ ಋತುಸ್ರಾವದ ಅವಧಿಯಲ್ಲಿ ಆಕೆಯನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದ ಕರ್ಮಠರು ತಮ್ಮ ಮನೆಯಿಂದಲೇ ತಾರತಮ್ಯದ ನೀತಿಯನ್ನು ಸಮಾಜದ ಮೇಲೆ ಹೇರಿರುತ್ತಾರೆ. ಮನುಷ್ಯ ಬದುಕಿನಲ್ಲಿ ನಿಸರ್ಗದ ಸಹಜ ಬದಲಾವಣೆಗಳನ್ನು ಕೂಡ ಮೈಲಿಗೆ ಎಂದು ನಂಬಿಸುವˌಆಚರಿಸುವ ಪದ್ದತಿಯಂಥ ಕ್ರೂರತನ ಬಹುಶಃ ಜಗತ್ತಿನ ಯಾವ ಭಾಗದಲ್ಲೂ ಕಾಣಸಿಗಲಿಕ್ಕಿಲ್ಲ. ಸ್ತ್ರೀಯನ್ನು ಕೀಳೆಂದುˌಮೈಲಿಗೆ ಎಂದುˌಕೇವಲ ಭೋಗದ ವಸ್ತುವೆಂದು ತಿರಸ್ಕರಿಸಿ ಆಕೆಗೆ ಧಾರ್ಮಿಕ ಸಂಸ್ಕಾರಗಳನ್ನು ನಿರಾಕರಿಸಿದ ಕಾಲಘಟ್ಟದಲ್ಲಿ ಪುರುಷರಂತೆ ಸ್ತ್ರೀ ಕೂಡ ಧಾರ್ಮಿಕ ಸಂಸ್ಕಾರ ಪಡೆಯಲು ಅರ್ಹಳೆಂದು ಇಷ್ಟಲಿಂಗಧಾರಣೆ ಮಾಡಿಸಿದ ಶರಣರು ಅವಳಿಗೆ ಅಂದಿನ ಜನತಾಂತ್ರಿಕ ಅನುಭವ ಮಂಟಪದಲ್ಲಿ ಸರಿಸಮಾನವಾಗಿ ಭಾಗವಹಿಸುವ ಅವಕಾಶವನ್ನಿತ್ತು ಶೋಷಕವರ್ಗಕ್ಕೆ ಕಠಿಣವಾದ ಸಂದೇಶವನ್ನು ರವಾನಿಸುತ್ತಾರೆ. ಅದರ ಪರಿಣಾಮದಿಂದಲೇ ಕಲ್ಯಾಣದ ಅನುಭವಮಂಟಪದಲ್ಲಿ ಅಕ್ಕ ಮಹಾದೇವಿಯಿಂದ ಹಿಡಿದು ಅನೇಕ ಸ್ತ್ರೀ ವಚನಕಾರ್ತಿಯರು ಪುರುಷರಿಗೆ ಸರಿಸಮಾನವಾಗಿ ತಮ್ಮ ಪ್ರೌಢಿಮೆಯನ್ನು ಮೆರೆಯಲು ಸಾಧ್ಯವಾಯಿತು. ಅಕ್ಷರಾಭ್ಯಾಸವು ಕೆವಲ ಕರ್ಮಠರ ಹಿತಕ್ಕಾಗಿ ಮೀಸಲಿರಿಸಿಕೊಂಡಿದ್ದ ಕಾಲದಲ್ಲಿ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ಮೂಲಕ ತಳಸಮುದಾಯದ ಜನರೆಲ್ಲರಿಗೂ ಅಕ್ಷರ ಸಂಸ್ಕ್ರತಿಯನ್ನು ಪರಿಚಯಿಸಿದ ಶರಣಸಂಕುಲ ಶೂದ್ರರೆಲ್ಲ ಅಕ್ಷರಸ್ಥರಾಗಿ ವಚನ ಬರೆಯುವಂತೆ ಪ್ರೇರೇಪಿಸಿ ಅಕ್ಷರವಂಚಕ ಪರಾವಲಂಬಿಗಳಿಗೆ ಬಹುದೊಡ್ಡ ಹೊಡೆತವನ್ನು ನೀಡುತ್ತಾರೆ. ದೇವರುˌಧರ್ಮ ಮತ್ತು ಸಂಪ್ರದಾಯಯ ಹೆಸರಿನಲ್ಲಿ ಸಾವಿರಾರು ಮೌಢ್ಯಗಳನ್ನು ಶೂದ್ರಜನಾಂಗದಲ್ಲಿ ತಳವೂರಿಸಿ ಅವರ ಮುಗ್ಧತೆಯ ದುರುಪಯೋಗ ಪಡೆಯುತ್ತˌಬಡವರುˌರೈತರುˌಕೂಲಿಕಾರರ ಶ್ರಮದ ಫಲವನ್ನು ಅನಾಯಾಸವಾಗಿ ತಿನ್ನುತ್ತ ಕುಳಿತುಕೊಂಡಿದ್ದವರಿಗೆ ಶರಣರು ಮೌಢ್ಯಗಳ ಕುರಿತು ಜನಸಾಮಾನ್ಯರಲ್ಲಿ ಜಾಗ್ರತೆ ಮೂಡಿಸುವ ಮೂಲಕ ಬಹುದೊಡ್ಡ ಲತ್ತೆಪೆಟ್ಟು ನೀಡುತ್ತಾರೆ. ತಮಗಿರುವ ಮೂಲಭೂತ ಹಕ್ಕುಗಳ ಬಗ್ಗೆ ಕಿಂಚಿತ್ ಜ್ಞಾನವಿಲ್ಲದಂತಿದ್ದ ನೆಲಮೂಲದ ಶೋಷಿತ ಸಮುದಾಯದ ಜನಗಳಲ್ಲಿ ವೈಚಾರಿಕತೆ ತುಂಬುವ ಮೂಲಕ ಮಾನವ ಹಕ್ಕುಗಳ ಮಹತ್ವವನ್ನು ತಿಳಿಯಹೇಳಿ ಸಮಸಮಾಜ ನಿರ್ಮಾಣದ ಪರಿಕಲ್ಪನೆಗೆ ಜೀವನೀಡುವ ಶರಣರು ಶ್ರೇಣಿಕ್ರತ ಸಮಾಜ ನಿರ್ಮಾತರಿಗೆ ಬಹು ಕಠಿಣವಾದ ಸವಾಲಾಗಿ ಪರಿಣಮಿಸುತ್ತಾರೆ. ಅಂದಿನ ಸಮಾಜದಲ್ಲಿ ಸಾಮಾಜಿಕ ಏರುಪೇರುಗಳ ಸಂಗಡ ಆರ್ಥಿಕ ಏರುಪೇರು ಕೂಡ ಅತಿಯಾಗಿ ತಾಂಡವವಾಡುತ್ತಿತ್ತು. ಅನ್ನˌವಿದ್ಯˌಮತ್ತು ಆಸ್ತಿ ಮೇಲ್ವರ್ಗದ ಸ್ವತ್ತಾಗಿದ್ದ ಕಾಲದಲ್ಲಿ ಎಲ್ಲ ಶ್ರಮಿಕವರ್ಗದ ಬಾಳನ್ನು ಹಸನಗೊಳಿಸುವ ದಾರಿಯೊಂದನ್ನು ಶರಣರು ಹುಡುಕುತ್ತಾರೆ. ಅದರ ಪರಿಣಾಮದಿಂದ ಆರ್ಥಿಕ ವಿಮವ್ಯಯ ನೀತಿಯನ್ನು ಶರಣರು ಕಾಯಕ ಮತ್ತು ದಾಸೋಹಗಳೆಂಬ ಎರಡು ಅಪರೂಪದ ಮಹತ್ವಪೂರ್ಣ ಪರಿಕಲ್ಪನೆಗಳ ಮೂಲಕ ಜಾರಿಗೆ ತರುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಶಕ್ತ್ಯಾನುಸಾರ ಶ್ರಮಪಡಬೇಕು ಮತ್ತು ಅದರಿಂದ ಬರುವ ಆದಾಯದಲ್ಲಿ ದಿನನಿತ್ಯದ ಅಗತ್ಯಕ್ಕೆ ಇಟ್ಟುಕೊಂಡು ಮಿಕ್ಕ ಆದಾಯ ಪರೋಪಕಾರˌಸಮಾಜದ ಸೇವೆಗೆ ಸದ್ವಿನಿಯೋಗಪಡಿಸಿಕೊಳ್ಳಬೇಕೆಂಬ ಅವರ ತತ್ವ ಸಮಾಜದಲ್ಲಿ ಬಡವ ಬಲ್ಲಿದವೆಂದ ಶ್ರೇಣಿಯ ನಡುವಿನ ಅಂತರನ್ನು ಹೋಗಲಾಡಿಸುವ ಮಹತ್ವದ ಉದ್ದೇಶಹೊಂದಿತ್ತು. ಅಗತ್ಯಕ್ಕಿಂತ ಹೆಚ್ಚಿನ ಸಂಪತ್ತು ಶೇಖರಣೆ ಸಮಾಜದ ಜನರ ನಡುವೆ ಆರ್ಥಿಕ ಅಂತರವನ್ನು ಹೆಚ್ಚಿಸುವುದೆಂದು ಶರಣರು ಕಾಯಕ ಮತ್ತು ದಾಸೋಹ ನೀತಿಯನ್ನು ಜಾರಿಗೊಳಿಸುತ್ತಾರೆ. ಮಧ್ಯಪ್ರಾಚ್ಯದಿಂದ ಬರಿಗೈಲಿ ಬಂದಿದ್ದ ಆರ್ಯರು ನೆಲಮೂಲದ ಜನಾಂಗವನ್ನು ವಂಚಿಸಿ ರಾಜಾಶ್ರಯದ ಮೂಲಕ ಭೂ ಒಡೆಯರಾಗಿರುತ್ತಾರೆ. ಅಂದು ಬಡವ ಬಲ್ಲಿದ ಎಂಬ ತಾರತಮ್ಯ ಕೊನೆಗೊಳ್ಳುವುದನ್ನು ಬಯಸದ ಉಳ್ಳವರಿಗೆ ಬಲವಾದ ಹೊಡೆತ ಕೊಟ್ಟವರು ಶರಣರು. ಸಾಮಾಜಿಕ ತಾರತಮ್ಯಗಳಿಂದ ಶೂದ್ರನನ್ನು ವಿಮೋಚನೆಗೊಳಿಸಲು ಶರಣರು ಅಗ್ರಜˌಅಂತ್ಯಜ ಎರಡೂ ವರ್ಗಗಳನ್ನು ಲಿಂಗಧಾರಣೆಯ ಮೂಯಕ ಒಂದುಗೂಡಿಸುತ್ತಾರೆ. ಅದರ ಪರಿಣಾಮದಿಂದ ಪೂರ್ವಾಶ್ರಮದ ಅಗ್ರಜ ಮಧುವಯ್ಯನ ಮಗಳು ಹಾಗೂ ಪೂರ್ವಾಶ್ರಮದ ಅಂತ್ಯಜ ಹರಳಯ್ಯನ ಮಗನ ಕಲ್ಯಾಣವನ್ನು ಶರಣರು ಸಾಕ್ಷೀಕರಿಸುತ್ತಾರೆ. ಈ ಮದುವೆಯ ಕಾರಣವನ್ನಿಟ್ಟುಕೊಂಡು ಕರ್ಮಠ ಪ್ರತಿನಿಧಿಗಳಾದ ನಾರಾಯಣಕ್ರಮಿತˌಕೇಶವ ಭಟ್ಟˌವಿಷ್ಣುಪೆದ್ದಿˌಕೃಷ್ಣ ಭಟ್ಟ ಮುಂತಾದವರು ದೊರೆ ಬಿಜ್ಜಳನಲ್ಲಿ ಪ್ರತಿಲೋಮ ವಿವಾಹದ ಮೂಲಕ ವರ್ಣಸಂಕರದಂಥ ಮಹಾಪರಾದವಾಯಿತೆಂದು ದೂರು ನೀಡುತ್ತಾರೆ. ಅದೂ ಬಸವಣ್ಣನವರನ್ನು ಗಡಿಪಾರು ಮಾಡಿ ಅವರ ಅನುಪಸ್ಥಿತಿಯಲ್ಲಿ ಶರಣರ ವಿಚಾರಣೆ ನಡೆಸಲಾಗುತ್ತದೆ. ವರ್ಣವನ್ನೇ ವಿಶಾನಗೊಳಿಸಿ ಲಿಂಗಧಾರಣೆಯ ಮೂಲಕ ಸಮಾನ ವಿಚಾರಧಾರೆಯುಳ್ಳ ಲಿಂಗಾಯತ ಧರ್ಮಿಯರ ನಡುವೆ ನಡೆದ ಮದುವೆ ಇದೆಂದು ಶರಣರು ದೊರೆಯೊಂದಿಗೆ ವಾದಿಸುತ್ತಾರೆ. ಚತುರ್ವರ್ಣದ ಪರಿಪಾಲನೆಯ ಶಪತ ಮಾಡಿದ ದೊರೆಗೆ ಕರ್ಮಠರು ಶರಣರ ಮೇಲೆ ಕಠಿಣ ಕ್ರಮದ ಒತ್ತಡ ಹೇರುತ್ತಾರೆ. ಅದರ ಪರಿಣಾಮದಿಂದ ಬಸವಣ್ಣನವರ ಗಡಿಪಾರುˌಶರಣರ ಮಾರಣಹೋಮˌವಚನಕಟ್ಟುಗಳ ಸುಡುವಿಕೆಯಂಥ ಅವಗಡಗಳಿಗೆ ಸಂಧಿಯೊದಗಿ ಕಲ್ಯಾಣದಲ್ಲಿ ಮಹಾ ವಿಪ್ಲವ ಘಟಿಸಿಹೋಗುತ್ತದೆ. ಜೀವವಿರೋಧಿ ಕರ್ಮಠ ವೈದಿಕರ ಕೈಮೇಲಾಗಿ ಶರಣರು ತಂಡ ತಂಡಗಳಾಗಿ ತಾವು ಬರೆದ ಅಮೂಲ್ಯ ವಚನರಾಶಿಗಳನ್ನು ರಕ್ಷಿಸಲೋಸುಗ ಕಲ್ಯಾಣವನ್ನು ತೊರೆಯುತ್ತಾರೆ. ಈ ರೀತಿಯಾಗಿ ಜಗತ್ತಿನ ಬಹು ಮಹತ್ವವಾದ ಪರಿವರ್ತನೆಯ ಉದ್ದೇಶಹೊಂದಿದ್ದ ಪರ್ಯಾಯ ವ್ಯವಸ್ಥೆಯ ಚಳುವಳಿಯೊಂದು ದುರಂತ ಅಂತ್ಯ ಕಾಣುತ್ತದೆ. ಆದರೆ ಶರಣು ಬಿಟ್ಟು ಹೋದ ಹೊಸವಿಚಾರಗಳುˌವಚನಗಳುˌಅವರ ಪರ್ಯಾಯ ವ್ಯವಸ್ಥೆಯ ಚಿಂತನೆಗಳು ಇಂದಿನ ಅಧುನಿಕ ಕಾಲದಲ್ಲೂ ನಮ್ಮ ಸಮಾಜಕ್ಕೆ ಅತ್ಯಗತ್ಯವಾದವುಗಳು ಎನ್ನುವುದಂತೂ ಸತ್ಯವಾದ ಸಂಗತಿ. ~ಡಾ. ಜೆ ಎಸ್ ಪಾಟೀಲˌವಿಜಯಪುರ.
About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

Leave a Reply

Your email address will not be published. Required fields are marked *

error: Content is protected !!