Breaking News
Home / featured / ವಿದ್ಯೆಯ ಪರ್ವತವೇ ಆದ ಸರ್ವಜ್ಞ

ವಿದ್ಯೆಯ ಪರ್ವತವೇ ಆದ ಸರ್ವಜ್ಞ

*ವಿದ್ಯೆಯ ಪರ್ವತವೇ ಆದ ಸರ್ವಜ್ಞ !!*

________________________________

 

 

ಬಾಲಾಜಿ ಕುಂಬಾರ

ಬೀದರ : ಕನ್ನಡ ಸಾಹಿತ್ಯದ ಕುರಿತು ಅವಲೋಕಿಸಿದಾಗ ೧೨ನೇ ಶತಮಾನದ ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯ ಹಾಗೂ ೧೫ನೇ ಶತಮಾನದಲ್ಲಿ ದಾಸರು ರಚಿಸಿದ ದಾಸ ಸಾಹಿತ್ಯ ಪ್ರಕಾರಗಳು ಕರ್ನಾಟಕ ಸಾಹಿತ್ಯ ಲೋಕದ ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದರೆ ತಪ್ಪಾಗಲಾರದು. ಕೇವಲ ಕರ್ನಾಟಕ ಅಷ್ಟೇ ಅಲ್ಲದೇ ಇಡೀ ವಿಶ್ವಕ್ಕೆ ಮಾದರಿಯಾಗುವ ಸಾಹಿತ್ಯ ಸಂಪತ್ತು ನಮ್ಮ ವಚನಕಾರರು, ದಾಸರು ನೀಡಿರುವ ಕೊಡುಗೆ ಅನನ್ಯವಾದದ್ದು . ಸಮಾಜೋಧಾರ್ಮಿಕ ಸುಧಾರಣೆಗಾಗಿ ಶ್ರಮಿಸಿರುವ ಮೂಲಕ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದರು.

ಸಮಾನತೆ ಸಮಾಜಕ್ಕೆ ಅವಶ್ಯಕತೆವಿರುವ ಸಾಹಿತ್ಯ ಸಂಪತ್ತು ವತನಕಾರರು , ದಾಸರು ನೀಡಿದರು ಎಂದು ಹೇಳಲು ತುಂಬಾ ಹೆಮ್ಮೆಯೆನಿಸುತ್ತದೆ. ತದನಂತರ ಬಸವಾದಿ ಶರಣ ವಚನಧರ್ಮ ಹಾಗೂ ದಾಸರ ಕೀರ್ತನೆಗಳ ಸಿದ್ಧಾಂತವನ್ನು ಮತ್ತೆ ಮನ್ನಡೆಸಲು ಜನಿಸಿ ಬಂದವನು ಶ್ರೇಷ್ಠ ಸಂತ ಸರ್ವಜ್ಞ ಕವಿ.

ಕನ್ನಡ ಕುಲಕೋಟಿಯ ಹೆಮ್ಮೆಯ ಪುತ್ರ, ತ್ರಿಪದಿ ಕವಿ ಎಂದೇ ಪ್ರಸಿದ್ಧಿ ಪಡೆದು ಸಮಾನತೆ ಸಮಾಜ ಕಟ್ಟಲು ಬಯಸಿದ ಸಂತ ಸರ್ವಜ್ಞ ಕವಿ. ಸರ್ವಜ್ಞನು ೧೭ನೇ ಶತಮಾನದ ಆದಿಭಾಗದಲ್ಲಿ ಜನಿಸಿದನೆಂದು ಸಂಶೋಧನೆಯಿಂದ ತಿಳಿದು ಬರುತ್ತದೆ. ಧಾರವಾಡ(ಇಂದಿನ ಹಾವೇರಿ) ಜಿಲ್ಲೆಯ ಹಿರೇಕೇರೂರ ತಾಲ್ಲೂಕಿನ (ಅಂಬಲೂರು )ಮಾಸೂರು ಗ್ರಾಮದಲ್ಲಿ ಜನಿಸಿದನು. ಸರ್ವಜ್ಞ ಕವಿಯು ತಾನು ಯಾರೆಂಬುದು ಸಂಕ್ಷಿಪ್ತವಾದ ಪರಿಚಯ ಆತನ ವಚನಗಳಿಂದ ತಿಳಿದು ಬರುತ್ತದೆ.

*ತಂದೆ ಕುಂಬಾರಮಲ್ಲ ತಾಯಿ ಮಳಲಾದೇವಿ ಇಂದು ಶೇಖರನ ವರಪುತ್ರ ಧರಣಿಗೆ ಬಂದು ಜನಿಸಿದೇನು ಸರ್ವಜ್ಞ*

ಶಾಲೆಯ ಮೆಟ್ಟಿಲು ಹತ್ತಿದವನಲ್ಲ, ತಂದೆ ತಾಯಿಯ ಆಶ್ರಯ ಇಲ್ಲದೇ ವಿರಾಗಿಯಾಗಿ ದೇಶ ಸಂಚಾರ ಮಾಡಿದನು . ತನ್ನ ಅಗಾಧ ಜ್ಞಾನ ಪಾಂಡಿತ್ಯದ ಫಲವಾಗಿ ಇಂದು ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠ ಸಂತ ಕವಿಗಳಲ್ಲಿ ಸರ್ವಜ್ಞ ಕವಿಗೆ ಮೊದಲ ಸ್ಥಾನವಿದೆ. ತನ್ನ ತ್ರಿಪದಿಗಳಲ್ಲಿ ಜಾನಪದ ಸೊಗಡು, ಸರಳ ನಿರೂಪಣೆ ಹಾಗೂ ಮಾನವ ವಿಶ್ವಮಾನವವಾಗಲು ಅವಶ್ಯವಿರುವ ವಚನಗಳ ಸಾರ ಉಣಬಡಿಸಿದ್ದಾನೆ . ತ್ರಿಪದಿ ವಚನಗಳ ಮೌಲಿಕ ಸಾಹಿತ್ಯದಿಂದ ಕನ್ನಡ ಅಕ್ಷರಲೋಕವನ್ನು ಶ್ರೀಮಂತಗೊಳಿಸಿದ ಶ್ರೇಯಸ್ಸು ಸರ್ವಜ್ಞ ಕವಿಗೆ ಸಲ್ಲುತ್ತದೆ.

*ಸರ್ವಜ್ಞನೆಂಬುವನು ಗರ್ವದಿಂದಾದವನೇ? ಸರ್ವರೊಳಗೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ*

*ಅಂದಿನ ಪುಷ್ಪದತ್ತ ಬಂದ ಸರ್ವಜ್ಞ ವರರುಚಿಯಾಗಿ ಮುದವಸಾರೆ ಸರ್ವಜ್ಞನೆಂದೆನಿಸಿ ನಿಂದವನು ನಾನೇ ಸರ್ವಜ್ಞ*

ಸರ್ವಜ್ಞ ಕವಿಗೆ ಆತನ ತಾಯಿ ಮಳಲಾದೇವಿ ‘ಪುಷ್ಪದತ್ತ’ ಎಂದು ನಾಮಕರಣ ಮಾಡುತ್ತಾಳೆ. ಮುಂದೆ ಪುಷ್ಪದತ್ತನು ‘ಸರ್ವಜ್ಞ’ ಕಾವ್ಯನಾಮದಿಂದ ಹೇಗೆ ಪ್ರಸಿದ್ಧಿ ಪಡೆದೆ ಎಂಬುದು ಆತನೇ ತನ್ನ ವಚನಗಳಲ್ಲಿ ಹೇಳಿಕೊಂಡಿದ್ದಾನೆ.

ಸಮಾಜದ ಜನರೊಂದಿಗೆ ಬೆರೆತು ಸರ್ವರಿಂದ ಒಂದೊಂದು ಅಕ್ಷರ ಕಲಿತು ಜ್ಞಾನ ಸಂಪಾದಿಸಿದ್ದೇನೆ ಹೊರತು ಗರ್ವದಿಂದ ಸರ್ವಜ್ಞನಾದವನಲ್ಲ ಎಂಬುದು ಈ ಮೇಲಿನ ತ್ರಿಪದಿಗಳಿಂದ ಖಚಿತಪಡಿಸುತ್ತಾನೆ. ಬಹುದಿನಗಳಿಂದ ಮೇಲ್ವರ್ಗದ ಶಕ್ತಿಗಳಾದ ಪುರೋಹಿತಶಾಹಿ ವ್ಯವಸ್ಥೆಯ ಅಂಧಭಕ್ತಿ, ಜಾತಿ, ದೌರ್ಜನ್ಯ, ದಬ್ಬಾಳಿಕೆ , ಶೋಷಣೆ ಹಾಗೂ ಮೌಢ್ಯತೆಗಳೆಂಬ ಅನಿಷ್ಟತೆಗಳು ಮುನ್ನಡೆಸಿಕೊಂಡು ಸಮಾಜದಲ್ಲಿ ಅಸಮಾನತೆ ಬಿತ್ತಿದ್ದರು .ತಳವರ್ಗ ಸಮುದಾಯದ ಜನರಿಗೆ ವೇದ,ಶಾಸ್ತ್ರ, ಆಗಮ, ಪುರಾಣ, ಹೋಮ, ಹವನಗಳೆಂಬ ಗೊಡ್ಡು ಸಂಪ್ರದಾಯಗಳಿಗೆ ಬಲಿಯಾಗಿಸಿ ಶೋಷಣೆ ,ಕಂದಾಚಾರ , ಗುಲಾಮಗಿರಿತನ ಮೆರೆಯುತ್ತಿರುವ ಸಂಪ್ರದಾಯವಾದಿಗಳ ವ್ಯವಸ್ಥೆಯನ್ನು ಸರ್ವಜ್ಞ ಕವಿ ತ್ರಿಪದಿಗಳ ಮೂಲಕ ದಿಕ್ಕರಿಸುತ್ತಾನೆ.

*ನಡೆವುದೊಂದೆ ಭೂಮಿ ಕುಡಿಯುದೊಂದೆ ನೀರು ಸುಡುವಗ್ನಿಯೊಂದೆ ಇರುತ್ತಿರಲು ಕುಲಗೋತ್ರ ನಡುವೆ ಎತ್ತಣದು ಸರ್ವಜ್ಞ*

ಕುಲಗೋತ್ರಗಳ ನಡುವೆ ಭೇದಭಾವ ಮಾಡುವ ಜಾತಿವಾದಿಗಳಿಗೆ ಪ್ರಶ್ನಿಸುತ್ತಾರೆ.
ಮತ್ತೊಂದು ವಚನದಲ್ಲಿ

*ಎಲುವಿನ ಕಾಯಕ್ಕೆ ಸಲೆ ಚರ್ಮದ ಹೊದಿಕೆ ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ*

ಎಂದು ಕುಲ ಕುಲಗಳ ನಡುವೆ ಭಿನ್ನವೇತಕ್ಕೆ ಎಂದು ಪ್ರಶ್ನೆ ಮಾಡುತ್ತಾನೆ. ‘ಯಾತರ ಹೂವೇನು ನಾತವಿದ್ದರೆ ಸಾಕು, ಶಿವನೊಲಿದಾತನೇ ಜಾತವೆಂದು ಅರಿತುಕೋ ಮರುಳ ಮಾನವ’ ಎಂದು ನಿರ್ಭಿಡೆಯಿಂದ ಎಚ್ಚರಿಸುತ್ತಾನೆ.
ಸರ್ವಜ್ಞ ಕವಿಗೆ ವೇದ, ಪುರಾಣ, ಆಗಮ, ಶಾಸ್ತ್ರಗಳ ಮೇಲೆ ನಂಬಿಕೆವಿರಲ್ಲಿಲ್ಲ. ಬಹುದೇವೋಪಾಸನೆ, ಮೂರ್ತಿಪೂಜೆ,ಮೌಢ್ಯತೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾನೆ. ಶರಣರು ತಮ್ಮ ವಚನಗಳ ಮುಖಾಂತರ ‘ಪುರಾಣವೆಂಬುದು ಪುಂಡರ ಗೋಷ್ಠಿ ‘ ಎಂದು ದಿಕ್ಕರಿಸಿದ ಮಾತು ಸರ್ವಜ್ಞ ಕವಿ ಕೂಡ ತನ್ನ ತ್ರಿಪದಿಗಳಿಂದ ಟೀಕಿಸುತ್ತಾನೆ

*ಓದು ವಾದಗಳೇಕೆ ಗಾದಿಯ ಮಾತೇಕೆ ವೇದ ಪುರಾಣ ನಿನಗೇಕೆ ಲಿಂಗದಾ ಹಾದಿಯರಿದನಗೆ ಸರ್ವಜ್ಞ*

ಮನುವಾದಿಗಳ ಜಾಡ್ಯದಿಂದ ಹೊರಬಂದು ವೈಚಾರಿಕತೆ, ವೈಜ್ಞಾನಿಕ ಮನೋಭಾವದಿಂದ ಬಾಳಲು ಸಲಹೆ ನೀಡುತ್ತಾನೆ. ಗಂಗೆ ಗೋದಾವರಿ ತುಂಗಭದ್ರಗಳಲ್ಲಿ ಮುಳಗಿದರೇನು ಫಲವಯ್ಯಾ? ನಿಷ್ಠೆ ನೆಲೆಗೊಳದೆ ಭಜಿಸುವ ಪೂಜೆ ತಾ ನಷ್ಟ ಕಾಣಯ್ಯಾ ಎಂದು ಮೂಢ , ಅನಿಷ್ಟ ಆಚರಣೆಗಳು ವಿರೋಧಿಸುತ್ತಾನೆ. ಅಮಾಯಕ ಬಡ ಜನರ ತಲೆಗೆ ಗೊಡ್ಡು ವೇದ , ಆಗಮ,ನೇಮ, ನಿಷ್ಠೆ, ಶಾಸ್ತ್ರಗಳು ಪಠಣ ಮಾಡಿಸಿ ದೈವಭಕ್ತಿಗಿಂತ ದೇವರ ಭಯವೇ ತುಂಬಿ ದೇವರ ಹೇಸರೇಳಿ ಲೂಟಿ ಹೊಡೆಯುವ ಅಂಧಭಕ್ತರಿಗೆ ‘ನಿಷ್ಠೆಯಿಲ್ಲದ ಪೂಜೆ ಹಾಳೂರ ಕೊಟ್ಟಿಗುರಿದಂತೆ ‘ ಚಿತ್ತವಿಲ್ಲದೆ ಗುಡಿ ಸುತ್ತಿದೆಡೆ ಫಲವೇನು ಎತ್ತು ಗಾಣವನು ಹೊತ್ತು ತಾ ಸತ್ತಿಬಂದಂತೆ’ ಎಂದು ತೀವ್ರವಾಗಿ ಛಾಡಿಸುತ್ತಾನೆ . ಪುರೋಹಿತಶಾಯಿ ವ್ಯವಸ್ಥೆಯಿಂದ ತಳಸಮುದಾಯದವರ ಮೇಲೆ ನಡೆಯುತ್ತಿರುವ ಶೋಷಣೆ, ದೌರ್ಜನ್ಯ, ಜಾತಿಯತೆಗಳ ವಿರುದ್ಧ ಸಿಡಿದೇಳುತ್ತಾನೆ.

ಸರ್ವಜ್ಞ ಕವಿಯ ದ್ರಷ್ಟಿಯಲ್ಲಿ ಗುರುವಿಗೆ ಉಚ್ಚ ಸ್ಥಾನದಲ್ಲಿರಿಸಿ ಪೂಜಿಸಿ ಗುರುವಿನ ಮಹತ್ವ ಎತ್ತಿ ಹಿಡಿದಿರಿವುದು ಕಂಡು ಬರುತ್ತದೆ.
ಹೀಗೊಂದು ತ್ರಿಪದಿಗಳಲ್ಲಿ

*ಬಂಧುಗಳು ಆದವರು ಬಂದುಂಡು ಹೋಗುವರು ಬಂಧನವ ಕಳೆಯಲಿಯರಾ ಗುರುವಿಗಿಂತ ಬಂಧಗಳುಂಟೆ ಸರ್ವಜ್ಞ*

ಎಂದು ಗುರುವಿಗಿಂತ ದೊಡ್ಡವರು ಮತ್ತ್ಯಾರಿಲ್ಲ ‘ ಗುರುರಾಯ ಬಂಧನವ ಕಳೆವ’ ಎಂದು ಹೇಳುತ್ತಾನೆ. ‘ಜಂಗಮನ ಭಕ್ತನ ನಡೆ ಲೇಸು ಶರಣರ ಸಂಗವೇ ಲೇಸು’ ಎಂದು ಸಕಲ ಜೀವಾತ್ಮರಿಗೂ ಲೇಸು ಬಯಸಿ ಸಜ್ಜನರ ಸಂಗವರಿತ ಶರಣ ಬಳಗ ಬಗ್ಗೆ ತನ್ನ ಅನುಭಾವ ವ್ಯಕ್ತಪಡಿಸುತ್ತಾನೆ. ಸಮಾಜದಲ್ಲಿ ನಾನೇ ಬುದ್ದಿವಂತ, ದೊಡ್ಡಜ್ಞಾನಿ ಪಂಡಿತನೆಂದು ಅಗ್ಗದ ಪ್ರಚಾರ ಗಿಟ್ಟಿಸಿಕೊಳ್ಳುವರಿಗೆ ‘ಎಲ್ಲರೂ ಬಲ್ಲವರಿಲ್ಲ ಬಲ್ಲವರು ಬಹಳವಿಲ್ಲ’ ‘ ನಾನು ಗರ್ವದಿಂದಾವನಲ್ಲ ಸರ್ವರೋಳಗೊಂದು ನುಡಿಗಳಿತು ನಾ ಸರ್ವಜ್ಞನಾದೇನೆಂಬುದು ಸ್ಪಷ್ಟಪಡಿಸುತ್ತಾನೆ. ಸಾಮಾಜಿಕ ಬದುಕಿನಲ್ಲಿ ಒಳಿತುಮಾಡುವ ಜನರಿಗೆ ಟೀಕಿಸುವವರ ಒಂದು ಗುಂಪು ಇದ್ದೆ ಇರುತ್ತದೆ. ತನ್ನ ಕಾರ್ಯ ತಾ ಮಾಡಲು ಕೈಲಾಗದವ ಮತ್ತೊಬ್ಬರ ಉತ್ತಮ ನಡೆ ಕಂಡು ಒಳಗೊಳಗೆ ಸಂಕಟಪಟ್ಚು ಟೀಕಿಸಲು ಹೆಣಗುತ್ತಾನೆ. ಅಂಥಹ ಮೂರ್ಖರಿಗೆ ತನ್ನ ತ್ರಿಪದಿಗಳಿಂದ ಖಾರವಾಗಿ ಛಾಡಿಸಿದ್ದು ನೋಡಬಹುದು.

*ಆನೆ ಬೀದಿಲಿ ಬರಲು ಶ್ವಾನ ತಾ ಬೊಗಳಿತು ಶ್ವಾನನಂತಾನೆ ಬೊಗಳಿದರೆ ಆನೆಯ ಮಾನವೇ ಹಾನಿ ಸರ್ವಜ್ಞ*

ಎಂದು ಸ್ಪಷ್ಟ ಉದಾಹರಣೆ ಮೂಲಕ ತಿಳಿಸುತ್ತಾನೆ. ‘ಕಣ್ಣು ನಾಲಿಗೆ ಮತ್ತು ಮನವು ತನ್ನ ಹಿಡಿತದಲ್ಲದ್ದಿದ್ದರೆ ತನ್ನನ್ನೇ ಕೊಲ್ಲುವವು’ ಎಂದು ನಮಗೆ ಮುಂದಾಗುವ ಅನಾಹುತಕ್ಕೆ ನಾವೇ ಹೊಣೆಗಾರರಾಗುತ್ತೇವೆ ಎಂಬ ಎಚ್ಚರಿಕೆ ಮಾತು ಹೇಳುತ್ತಾನೆ. ಸರ್ವಜ್ಞ ಕವಿಯು ತಾನು ಜನಿಸಿದ ಕುಂಬಾರ ಕುಲದ ಹಿರಿಮೆ ಮಹತ್ವ ತಿಳಿಸಿ ಹೆಮ್ಮೆಪಡುತ್ತಾನೆ.
‘ಕೊಂಬು ಹೋರಿಗೆ ಲೇಸು ತುಂಬು ಕೇರಿಗೆ ಲೇಸು ಕುಂಬಾರ ಲೇಸು ಊರಿಂಗೆ ‘ ಎಂಬ ಅಭಿಮಾನದ ಮಾತನಾಡುತ್ತಾನೆ.ಭಾರತದ ವಾಸ್ತವ ಹಾಗೂ ಭವಿಷ್ಯದ ಸ್ಥಿತಿ ಕುರಿತು ಗಮನಿಸಿದಾಗ ಬೆಚ್ಚಿಬಿಳಿಸುವ ಕೊಲೆ, ದರುಡೆ, ಅತ್ಯಾಚಾರ, ದೌರ್ಜನ್ಯ,ಶೋಷಣೆ, ಭಯೋತ್ಪಾದನೆಗಳಂತಹ ಮಾನವವಿರೋಧಿ ಭಯಂಕರ ಹೇಯ ಕೌರ್ಯಗಳು ಇಂದಿನ ಸಮಾಜಕ್ಕೆ ಮಾರಕವಾಗಿ ಪರಿಣಮಿಸಿರುವುದು ಕಂಡುಬರುತ್ತದೆ. ಇಂತಹ ಅವ್ಯವಸ್ಥೆ ನಿರ್ನಾಮ ಮಾಡಲು ೪೦೦ ವರ್ಷಗಳ ಹಿಂದೆ ನುಡಿದ ಸರ್ವಜ್ಞ ಕವಿಯ ಈ ಒಂದು ವಚನವು ವಾಸ್ತವ ಸಮಾಜ ಸ್ಥಿತಿ ಬದಲಾವಣೆಗೆ ಹಿಡಿದ ಕನ್ನಡಿಯಾಗಿದೆ.

*ಕಣ್ಣು ನಾಲಿಗೆ ಮನವು ತನ್ನದೆಂದೆನೆಬೇಡ , ಈ ಮೂರು ತನ್ನನ್ನೇ ಕೊಲ್ಲತ್ತವೆ*

ಎಂಬ ನಿಜ ಸತ್ಯ ನುಡಿಗಳಿಂದ ಮಾನವನಿಗೆ ಎಚ್ಚರಿಸುತ್ತಾನೆ. ನೇರ, ದಿಟ್ಟ, ಪ್ರಾಮಾಣಿಕತೆ, ವೈಚಾರಿಕತೆ ನಿಲುವು ಅಡಗಿರುವ ತ್ರಿಪದಿಗಳ ಸಂಪತ್ತು ನಿಜಕ್ಕೂ ಅಗಾಧವೆನಿಸುತ್ತದೆ. ಸರ್ವಜ್ಞ ಕವಿಗೆ ತನ್ನ ಸಮಾಜದ ಬಗ್ಗೆ ಗೌರವ ವ್ಯಕ್ತಪಡಿಸುತ್ತಾ ತಾನು ಹುಟ್ಚಿದ ಕುಂಬಾರ ಕುಲದ ಬಗ್ಗೆ ಹಿರಿತನ ಸಾರಿ ಹೇಳಿದ್ದು ನೋಡಬಹುದು. ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದೇ ಇಡೀ ವಿಶ್ವವೇ ಮೆಚ್ಚುವಂತಹ ಮಹತ್ವದ ಚಿಂತನಾಶೀಲ ಬರೆಹಗಳು ಕನ್ನಡ ಅಕ್ಷರ ಲೋಕಕ್ಕೆ ನೀಡಿದ್ದಾನೆ. ಬಸವಾದಿ ಶರಣರು ತಮ್ಮ ವಚನ ನುಡಿಗಳಿಂದ ಸಮಾನತೆ ಸಮಾಜ ನಿರ್ಮಾಣ ಮಾಡಲು ಬಯಸಿದರೋ ಅದೇ ತತ್ವಾಧಾರಿತ ವಿಚಾರವಂತಿಕೆ, ಸೂಕ್ಷ್ಮ ಪ್ರಜ್ಞಾವಂತಿಕೆಯಿಂದ ಸಂತ ಸರ್ವಜ್ಞ ಕೂಡ ಬಯಸಿ ತನ್ನ ವಿಷಯಗಳ ಅಭಿವ್ಯಕ್ತಿಗೊಳಿಸಿದ್ದು ಎಂದು ಕಾಣುತ್ತದೆ. ‘ಆಡು ಮುಟ್ಚದ ಸೊಪ್ಪಿಲ್ಲ’ಎನ್ನುವ ಹಾಗೇ ಸರ್ವಜ್ಞ ಕವಿ ಹೇಳದ ವಿಷಯವೇ ಇಲ್ಲ. ಸಮಾಜದ ಎಲ್ಲಾ ಓರೆ ಕೋರೆಗಳು ಅಂಕುಡೊಂಕುಗಳನ್ನು ತನ್ನ ತ್ರಿಪದಿಗಳಿಂದ ಯಾವ ಭಯವಿಲ್ಲದೇ ತಿದ್ದಿರುವುದು ಕಂಡು ಬರುತ್ತದೆ . ೧೨ನೇ ಶತಮಾನದಲ್ಲಿ ರಚಿತವಾದ ವಚನಗಳಿಗೂ ವಿರಾಗಿ ಸರ್ವಜ್ಞ ಕವಿ ರಚಿಸಿದ ತ್ರಿಪದಿಗಳಿಗೂ ಗಾಢ ಸೌಮ್ಯತೆವಿರುವುದು ಕಾಣುತ್ತೇವೆ . ವಚನಕಾರರ ಸದಾಶಯಗಳು ಸರ್ವಜ್ಞ ಕವಿ ರಚಿತ ತ್ರಿಪದಿಗಳಲ್ಲಿ ಕಂಡರೆ ವಚನ ಚಳುವಳಿಯ ವಚನಕಾರರ ಗಾಢವಾದ ಪ್ರಭಾವಿರುವುದು ಸಾಮನ್ಯವಾಗಿ ಗೋಚರಿಸುತ್ತದೆ. ಆದರ್ಶ ಜೀವನ ಶೈಲಿ ಹಾಗೂ ಮಾನವೀಯ ಮೌಲ್ಯ ಬಿತ್ತುವ ಮಹಾತ್ಮರ ಜಯಂತೋತ್ಸವ ಕಾರ್ಯಕ್ರಮವು ಕರ್ನಾಟಕ ಸರ್ಕಾರ ಕಳೆದ ೪ ವರ್ಷಗಳಿಂದ ಮಾಹಾಮಾನವತವಾದಿ ಸಂತ ಸರ್ವಜ್ಞ ಕವಿಯ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಆಚರಿಸಲು ಆದೇಶ ಹೊರಡಿಸಿದ್ದು ತುಂಬಾ ಸಂತೋಷದ ವಿಷಯ. ಸರ್ವಜ್ಞ ಕವಿಯು ಸಾವಿರಾರು ತ್ರಿಪದಿಗಳು ರಚಿಸಿದ್ದೇನೆಂದು ತನ್ನ ವಚನಗಳಲ್ಲಿ ಹೇಳಿಕೊಂಡಿದ್ದಾನೆ.

*ಏಳು ಕೋಟಿಯೆ ಕೋಟಿ ಏಳು ಲಕ್ಷವೇ ಲಕ್ಷ ಏಳು ಸಾವಿರದ ಎಪ್ಪತ್ತು ವಚನಗಳು ಹೇಳಿದನು ಕೇಳ ಸರ್ವಜ್ಞ*

ಸರ್ವಜ್ಞ ಕವಿ ಸಾಮಾಜಿಕ , ಆರ್ಥಿಕ ಸುಧಾರಣೆ, ಜಾತ್ಯಾತೀತ, ಮಾನವೀಯ ಮೌಲ್ಯ ಬಿತ್ತುವ ಸಾರ್ವಕಾಲಿಕ ಸತ್ಯ ಪ್ರತಿಪಾದಿಸುವ ಸಾವಿರಾರು ತ್ರಿಪದಿಗಳು ರಚಿಸಿದ್ದೇನೆಂದು ಹೇಳಿದ್ದಾನೆ. ಆದರೆ ಸಂಶೋಧನೆಯ ಮಾಹಿತಿ ಪ್ರಕಾರ ೧೦೦೦ ತ್ರಿಪದಿಗಳು ದೊರಕಿವೆ ಎಂದು ಪ್ರತಿಪಾದಿಸಲಾಗಿದೆ. ಸರ್ವಜ್ಞ ಕವಿಯ ತ್ರಿಪದಿಗಳು ಇಂದಿನ ಸಮಾಜದ ಯುವಜನಾಂಗ ಬದುಕಿಗೆ ದಾರಿದೀಪವಾಗಿವೆ. ಸರ್ವಜ್ಞ ಕವಿಯ ಕುರಿತು ಇನ್ನು ಹೆಚ್ಚಿನ ಸಂಶೋಧನೆ ನಡೆಸಿ ಕವಿಯ ಅನುಭಾವ ಸಮಾಜಕ್ಕೆ ಅರ್ಪಿಸುವ ಕಾರ್ಯ ಸರ್ಕಾರ ಮಾಡಬೇಕಾಗಿರುವುದು ಅಗತ್ಯವಿದೆ. ಸರ್ವಜ್ಞ ಕವಿಯ ಬದುಕ_ಬರಹ ಮುಂದಿನ ಜನಾಂಗಕ್ಕೆ ತಲುಪಿಸುವುದು ಪ್ರತಿಯೊಬ್ಬರ ಕರ್ತವ್ಯವಿದೆ. ಸರ್ವಜ್ಞ ಕವಿ ಜನಿಸಿದ ಕುಂಬಾರ ಸಮುದಾಯವು ಆರ್ಥಿಕ , ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಜನಾಂಗವಿದೆ. ಆ ಸಮುದಾಯದವರ ಹಿರಿಮೆ,ಒಗ್ಗಟ್ಟು, ಏಳಿಗಾಗಿ ಸರ್ವಜ್ಞ ಕವಿಯ ಜಯಂತಿ ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ಕುಂಬಾರ ಕುಲಬಾಂಧವರಿಗೆ ಖುಷಿಯ ವಿಚಾರ. ಕುಂಬಾರ ಸಮುದಾಯದ ಸರ್ವಾಂಗೀಣ ವಿಕಾಸಕ್ಕಾಗಿ ಕುಂಭಕಲಾ ಮಂಡಳಿಗೆ ಹೆಚ್ಚಿನ ಅನುದಾನ ನೀಡಬೇಕು, ಸರ್ವಜ್ಞ ಕವಿ ಪ್ರಾಧಿಕಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸರ್ವಜ್ಞ ಸಂದೇಶ ಸಮಾಜಕ್ಕೆ ತಿಳಿಸಲು ಮುಂದಾಗಬೇಕು . ಕುಂಬಾರ ಸಮುದಾಯವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದು ಅಗತ್ಯತೆಯ ಕಾರ್ಯ. ಕುಂಬಾರ ಜನಾಂಗಕ್ಕೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಿ ಸಮುದಾಯದ ಐಕ್ಯತೆ ಮತ್ತು ಏಳಿಗೆ ಕುರಿತು ಚಿಂತನೆ ನಡೆಸುವುದು ಸರ್ಕಾರದ ಮುಂದಿರುವ ಸವಾಲು. ಮಾಹಾಮಾನವತವಾದಿ ತ್ರಿಪದಿ ಬ್ರಹ್ಮ ಸರ್ವಜ್ಞ ಕವಿಯು ಈ ನಾಡಿನ ಶ್ರೇಷ್ಠ ಕವಿ, ಬಸವಾದಿ ಶರಣರ ಹಾಗೂ ದಾಸರ ತತ್ವಾದರ್ಶಗಳು ಸರ್ವಜ್ಞ ಕವಿಯ ವಚನಗಳಲ್ಲಿ ಕಾಣಬಹುದು . ಸಾಮಾಜಿಕ ಸುಧಾರಣೆಗಾಗಿ ತ್ರಿಪದಿ ವಚನಗಳ ಚಳುವಳಿ ನಡೆಸುವ ಮೂಲಕ ಜಾತಿ , ಲಿಂಗ, ವರ್ಗ, ವರ್ಣರಹಿತವಾದ ಸಮಾನತೆ ಸಮಾಜ ಕಟ್ಚಿ ಮಾನವ ವಿಶ್ವಮಾನವವಾಗಿಸಲು ಶ್ರಮಿಸಿದನು . ಸರ್ವಜ್ಞ ಕವಿಯ ತತ್ವ ಸಿದ್ಧಾಂತ ಸಮಾಜಕ್ಕೆ ಮಾದರಿಯಾಗಿವೆ . ಆ ಶತಮಾನದ ತ್ರಿಪದಿ ವಚನ ಕ್ರಾಂತಿ ಮುಖಾಂತರ ದಿಟ್ಟ ನಿಲುವು ತೋರಿದ ಸಂತ ಸರ್ವಜ್ಞ ಮಹಾಕವಿಗೆ ಶರಣು ಶರಣಾರ್ಥಿ,
ಸರ್ವಜ್ಞ ಜನಿಸಿ ಬದುಕಿದ ನಾಡಿನೋಳು ನಾವು ಹುಟ್ಚಿದ್ದು ನಮ್ಮೆಲ್ಲರ ಸೌಭಾಗ್ಯ , ಹೆಮ್ಮೆ ಪಡಲೇಬೇಕು ಹೌದಲ್ಲವೇ ?

*ಸಮಸ್ತ ನಾಡಿನ ಜನತೆಗೆ ಕವಿ ಸರ್ವಜ್ಞನವರ ಜಯಂತಿಯ ಹಾರ್ದಿಕ ಶುಭಾಷಯಗಳು*

ಬಾಲಾಜಿ ಕುಂಬಾರ

ಬೀದರ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ …

Leave a Reply

Your email address will not be published. Required fields are marked *

error: Content is protected !!