Breaking News
Home / featured / ಬಸವ ತತ್ವದ ಬೀಜ ಬಿತ್ತಿದ ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು

ಬಸವ ತತ್ವದ ಬೀಜ ಬಿತ್ತಿದ ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು

ತೆಲಂಗಾಣದ ರಾಜ್ಯದಲ್ಲಿ ಬಸವ ತತ್ವದ ಬೀಜ ಬಿತ್ತಿದ
ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು

ಇಂದಿನ ಬಹುತೇಕ ಮಠಗಳಲ್ಲಿ ಬಸವಾದಿ ಶರಣರ ವಿಚಾರಗಳನ್ನು ಒಪ್ಪದವರೆ ಕುಳಿತುಕೊಂಡಿದ್ದಾರೆ. ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ತಿರುಗಾಡಿ ತತ್ವ ಪ್ರಸಾರ ಮಾಡುವುದು ಒತ್ತಟ್ಟಿಗಿರಲಿ ಈ ಪುಣ್ಯಾತ್ಮರು ಎಲ್ಲೆಲ್ಲಿ ಕಾಲಿಡುತ್ತಾರೋ ಅಲ್ಲೆಲ್ಲ ಉಂಡು ಹೋದ ಕೊಂಡು ಹೋದ ರೀತಿಯಲ್ಲಿ ಭಕ್ತ ಸಮೂಹವನ್ನು ಒಂದೆ ಸಮ ತಿಕ್ಕಿ ಮುಕ್ಕಿ ಸುಲಿಗೆ ಮಾಡುತ್ತಿದ್ದಾರೆ. ಆ ಭಕ್ತರೂ ಅಷ್ಟೆ ತಮ್ಮ ಮನೆ ಅಂಗಡಿ ಮುಂಗಟ್ಟಿನತ್ತ ಬಂದಿರುವ ಸ್ವಾಮಿ, ಮಹಾಸ್ವಾಮಿಗಳಿಗೆ ಏನಾದರೂ ಕೊಟ್ಟರೆ ತಮಗೆ ಒಳ್ಳೆಯದಾಗುತ್ತದೆ ಎಂಬ ಭಾವದಿಂದ ತಮ್ಮಲ್ಲಿ ಇದ್ದಷ್ಟು ಕಾಣಿಕೆನೀಡಿ ಕೃತಜ್ಞತೆಯನ್ನು ಅನುಭವಿಸುತ್ತಾರೆ. ಆಶರ್ೀವಾದ, ಪಾದ ಪೂಜೆ , ತಮ್ಮ ಮುಖಾರವಿಂದದ ಧರ್ಶನದಲ್ಲಿಯೆ ಹೊತ್ತು ಗಳೆಯುತ್ತಿದ್ದಾರೆ. ಸಮಯ ಸಿಕ್ಕಾಗಲೆಲ್ಲ ಅಡ್ಡ ಪಲ್ಲಕ್ಕಿ ಉತ್ಸವಗಳನ್ನು ಏರ್ಪಡಿಸುತ್ತಾರೆ. ಜಾತ್ರೆ ಜಮಾತೆ ತಪ್ಪದೆ ನಡೆಸುತ್ತಾರೆ. ತಪ್ಪದೆ ತಮ್ಮ ಗುರುಗಳ ಹಾಗೂ ತಮ್ಮ ಹುಟ್ಟು ಹಬ್ಬಗಳನ್ನು ಆಚರಿಸಿಕೊಳ್ಳುತ್ತ ತಮ್ಮ ತಮ್ಮ ಮಠದ ಕೀರ್ತಿ ಪತಾಕೆಯನ್ನು ಹಾರಿಸುತ್ತಿದ್ದಾರೆ.

ಆದರೆ ಇವರೆಲ್ಲರಿಗೂ ಬಸವಾದಿ ಶರಣರ ಮೂಲ ಆಶಯಗಳನ್ನು ಜನ ಮಾನಸಕ್ಕೆ ತಲುಪಿಸಬೇಕು ಎಂಬ ಒಂಚೂರು ಕಾಳಜಿ ಇಲ್ಲವೆ ಇಲ್ಲ. ವಚನಕಾರರೆಲ್ಲರ ವಚನಗಳನ್ನು ಹೇಳುತ್ತಾರೆ. ವಚನಗಳನ್ನು ಉದಾಹರಿಸಿ ತಮ್ಮ ಪಾಂಡಿತ್ಯ ಪ್ರದರ್ಶನ ಮಾಡಿಸುತ್ತಾರೆ. ಅಪ್ಪಿ ತಪ್ಪಿಯೂ ಈ ಎಲ್ಲಾ ವಿಚಾರಗಳಿಗೆ ಮೂಲ ಗಂಗೋತ್ರಿಯೆ ಬಸವಾದಿ ಶರಣರು ಎಂದು ತಪ್ಪಿಯೂ ಹೇಳುವುದಿಲ್ಲ. ಏಕೆಂದರೆ ಬಸವಾದಿ ಶರಣರು ಬರೆದ ಎಲ್ಲಾ ವಚನಗಳ ಮೂಲ ಆಶಯ ಜನ ಮಾನಸಕ್ಕೆ ತಲುಪಿಸಿದರೆ ಖಂಡಿತವಾಗಿಯೂ ಅಲ್ಲಿ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಭಯ ಇವರನ್ನು ಕಾಡುತ್ತದೆ. ಹೀಗಾಗಿ ತಮ್ಮ ಭಕ್ತ ವರ್ಗಕ್ಕೆ ಬಸವಾದಿ ಶರಣರ ವಿಚಾರಗಳನ್ನು ತಿಳಿಸದೆ ಮೋಸ ಮಾಡುತ್ತಿದ್ದಾರೆ.

ಈ ಮೇಲಿನ ಮಾತಿಗೆ ಅಪವಾದ ಎನ್ನುವಂತೆ ರಾಜ್ಯದ ಅಲ್ಲಲ್ಲಿ ಬಸವ ತತ್ವವನ್ನು ಅಪ್ಪಿಕೊಂಡು ಒಪ್ಪಿಕೊಂಡು ಅವನ್ನು ಜನ ಮಾನಸಕ್ಕೆ ತಲುಪಿಸಬೇಕು ಎಂಬ ನಿಟ್ಟಿನಲ್ಲಿ ಹಲವಾರು ಜನ ಮಠಾಧೀಶರು ಕಾರ್ಯಪ್ರವೃತ್ತರಾಗಿದ್ದಾರೆ. ಏಕೆಂದರೆ ಇವರೊಳಗೆ ಬಸವ ಜೀವ ಪ್ರವಯಿಸುತ್ತಿದೆ. ಹೀಗಾಗಿ ಅವರು ಕುಂತರು ನಿಂತರು ಮಾತಾಡಿದರು ಬರೆದರು ಅದು ಅವರಿಗೆ ಅರಿವಿಲ್ಲದಂತೆ ಪ್ರವಹಿಸುತ್ತಲೆ ಇರುತ್ತದೆ. ಇಂಥ ಚಿಂತನೆ ಉಳ್ಳವರಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು ಒಬ್ಬರು.
ಡಾ. ಬಸವಲಿಂಗ ಪಟ್ಟದ್ದೇವರು ಹಿರೇಮಠ ಸಂಸ್ಥಾನಕ್ಕೆ ಬಂದಂದಿನಿಂದ ಇಲ್ಲಿಯವರೆಗೆ ಬಸವಾದಿ ಶರಣರನ್ನು ಅಪ್ಪಿಕೊಂಡು ಕ್ರಮಿಸಿದ ದಾರಿ ದೀರ್ಘವಾಗಿದೆ. ಇವರ ಹಿರಿಯ ಗುರುಗಳಾದ ಡಾ.ಮ.ಘ.ಚ. ಚೆನ್ನಬಸವ ಪಟ್ಟದ್ದೇವರ ಆಶಯಗಳನ್ನು ಇಂಬಿಟ್ಟುಕೊಂಡು ಬಸವಾದಿ ಶರಣರ ವಿಚಾರ ಹೊತ್ತು ಮುನ್ನಡೆದಿದ್ದಾರೆ. ನಮ್ಮ ರಾಜ್ಯವಲ್ಲದೆ ಮಹಾರಾಷ್ಟ್ರ, ಪಕ್ಕದ ತೆಲಂಗಾಣ ರಾಜ್ಯಗಳಲ್ಲಿಯೂ ಬಸವ ತತ್ವವನ್ನು ಪ್ರಸಾರ ಮಾಡಲು ಅಣಿಯಾಗಿ ಹೋಗುತ್ತಾರೆ. ತಿಂಗಳು ಗಟ್ಟಲೆ ತಮ್ಮ ಮಠದ ಬಸವ ರಥವೆಂಬ ವಿಚಾರದ ವಾಹನವನ್ನು ಏರಿ ಹೋಗುತ್ತಾರೆ.

ತೀರಾ ಇತ್ತೀಚೆಗೆ ತೆಲಂಗಾಣ ರಾಜ್ಯದಲ್ಲಿ ಒಂದು ತಿಂಗಳ ಪರ್ಯಂತ ಹಳ್ಳಿ, ಪಟ್ಟಣಗಳೆನ್ನದೆ ಎಲ್ಲಾ ಊರುಗಳಲ್ಲಿ ಬಸವ ತತ್ವದ ಪ್ರಸಾರವನ್ನು ಮಾಡುವ ಕಾರ್ಯಹಮ್ಮಿಕೊಂಡು ಯಶಸ್ವಿಯಾಗಿದ್ದಾರೆ. ಈ ಪ್ರವಾಸದ ಉದ್ದಕ್ಕೂ ತತ್ವ ಪ್ರಸಾರದ ಪುಸ್ತಗಳು ಮಾರಾಟವಾಗಿವೆ. ಹೋದಲ್ಲಿ ಬಂದಲ್ಲಿ ಶರಣರ ಭಾವ ಚಿತ್ರ, ವಿಭೂತಿ, ರುದ್ರಾಕ್ಷಿ, ವಚನಕಾರರ ಕುರಿತ ಪುಸ್ತಕಗಳು, ಶರಣರ ವಚನಗಳ ಭಾವಾನುಭವ ಮುಂತಾದವು ಸಾಕಷ್ಟು ಸಂಖ್ಯೆಯಲ್ಲಿ ಮಾರಾಟವಾಗಿವೆ. ಹೋದ ಹೋದಲ್ಲೆಲ್ಲ ಜನ ಹೂವಿನ ಮಳೆ ಸುರಿದು ಪ್ರೋತ್ಸಾಹಿಸಿದ್ದಾರೆ. ಶರಣರ ಆಶಯ, ಕಾಳಜಿಗಳನ್ನು ಕಂಡು ನಿಬ್ಬೆರಗಾಗಿದ್ದಾರೆ. ಶರಣರ ಬಗೆಗೆ ತಿಳಿದುಕೊಳ್ಳುವ, ಅವರ ವಚನಗಳನ್ನು ಓದುವ ಉತ್ಸಾಹ ತೋರಿಸಿದ್ದಾರೆ. ಹಾಡು ಭಾಷಣ, ಕಿರು ನಾಟಕಗಳು, ಪುಸ್ತಕಗಳ ಮೂಲಕ ಜನ ಮಾನಸಕ್ಕೆ ಶರಣರನ್ನು ತಲುಪಿಸಬೇಕು ಎಂಬ ಆಶೆ ಆಕಾಂಕ್ಷೆ ಇಟ್ಟುಕೊಂಡಿರುವ ಡಾ. ಬಸವಲಿಂಗ ಪಟ್ಟದ್ದೇವರು ಇಂದಿನ ಮಠಾಧೀಶರಿಗೆ ಮಾದರಿಯಾಗಿದ್ದಾರೆ.

ತೆಲಂಗಾಣ ರಾಜ್ಯದ ಯಾವೊಬ್ಬ ಭಕ್ತ ನೀವು ನಮ್ಮ ರಾಜ್ಯದಲ್ಲಿ ಬಂದು ತತ್ವ ಪ್ರಸಾರ ಮಾಡಿ ಎಂದು ಹೇಳದಿದ್ದರೂ ತಮ್ಮ ಕರ್ತವ್ಯ ಎಂಬಂತೆ ಅಲ್ಲಿ ಬಸವ ತತ್ವದ ಬೀಜವನ್ನು ಬಿತ್ತಿ ಬಂದ ಡಾ. ಬಸವಲಿಂಗ ಪಟ್ಟದ್ದೇವರು ನಮಗೆಲ್ಲ ವಿಶಿಷ್ಟರಾಗಿ ಕಾಣುತ್ತಾರೆ. ಡಾ. ಪಟ್ಟದ್ದೇವರೊಂದಿಗೆ ಮಹಾಲಿಂಗ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿಗಳು, ಮಲ್ಲಿಕಾರ್ಜುನ ಗೊಗ್ಗಾ ( ಇಂಜನೀಯರಿಂಗ ವಿದ್ಯಾರ್ಥಿ) 31 ಕಲಾವಿದರು. ದಿನಾಲು ರೂಪಕಗಳು. ಬಸವ ಸಂದೇಶ, ಶರಣ ಸಂಸ್ಕೃತಿ,ಮೌಢ್ಯಗಳ ಕುರಿತು ರಾಜು ಜುಬರ್ೆ ( ಮಹಾರಾಷ್ಟ್ರ : ಬಸವ ಪರಿಷತ್ ಸಂಚಾಲಕರು) ಮುಂತಾದ ಸುಮಾರು ಐವತ್ತುಕ್ಕೂ ಹೆಚ್ಚು ಜನ ತೆಲಂಗಾಣದ ತುಂಬೆಲ್ಲ ಓಡಾಡಿ ಬಂದಿದ್ದಾರೆ.

ಹೀಗಾಗಿ ಇಲ್ಲಿ ಬಸವಾದಿ ಶರಣರ ತಂಗಾಳಿ ಬೀಸುತ್ತಿದೆ. ಬಸವ ಬೀಜವನ್ನು ಮೊಟ್ಟ ಮೊದಲನೆಯದಾಗಿ ಬಿತ್ತಿದ ಕೀರ್ತಿ ಡಾ. ಬಸವಲಿಂಗ ಪಟ್ಟದ್ದೇವರು ಮತ್ತವರ ಮಠದ ಸ್ವಾಮೀಜಿಗಳಿಗೆ ಸಲ್ಲಲೇಬೇಕು.

0 ವಿಶ್ವಾರಾಧ್ಯ ಸತ್ಯಂಪೇಟೆ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!